ಬಟ್ಟಿಇಳಿಸುವಿಕೆ
ಯಾವುದೇ ದ್ರವವನ್ನು ಆವಿ ಮಾಡಿ ತರುವಾಯ ಅದನ್ನು ಸಾಂದ್ರೀಕರಿಸಿ ಪುನಃ ದ್ರವರೂಪಕ್ಕೆ ತರುವ ಕ್ರಮ (ಡಿಸ್ಟಿಲೇಶನ್). ಆಸವನ ಪರ್ಯಾಯನಾಮ. ಕಡಲ ನೀರು ಸ್ವಾಭಾವಿಕವಾಗಿ ಆವಿಯಾಗಿ ಮೋಡಕಟ್ಟಿ ತರುವಾಯ ದ್ರವರೂಪ ತಳೆದು ಮಳೆಯಾಗಿ ಬರುವ ಪ್ರಕೃತಿ ವ್ಯಾಪಾರ ಇದಕ್ಕೆ ಒಂದು ಪರಿಚಿತ ಉದಾಹರಣೆ. ನೀರನ್ನು ಕುದಿಸಿದಾಗ ಅದರ ಹಬೆ ಪಾತ್ರೆಯ ಮುಚ್ಚಳದ ಅಡಿಯಲ್ಲಿ ಹನಿಗೂಡುವುದಿಲ್ಲವೆ? ಇದು ಇನ್ನೊಂದು ನಿದರ್ಶನ.

ದ್ರವವನ್ನು ಶುದ್ಧೀಕರಿಸುವುದು ಅಥವಾ ದ್ರವ ಮಿಶ್ರಣದಿಂದ ಘಟಕಗಳನ್ನು ಪ್ರತ್ಯೇಕಿಸುವುದು ಬಟ್ಟಿಇಳಿಸುವುದರ ಮುಖ್ಯ ಉದ್ದೇಶ. ಸಾಮಾನ್ಯವಾಗಿ ಆವಿಯ ಸಂಯೋಜನೆ ಅದು ಹಿಂದಿದ್ದ ದ್ರವ ಮಿಶ್ರಣದ ಸಂಯೋಜನೆಗಿಂತ ಭಿನ್ನವಾಗಿರುವುದರಿಂದ ಇದು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಿಂದಲೂ ಆಲ್ಕೋಹಾಲನ್ನು ಅದರಲ್ಲಿರುವ ನೀರು ಮತ್ತು ಇತರ ಅಶುದ್ಧತೆಗಳಿಂದ ಬೇರ್ಪಡಿಸಲು ಈ ವಿಧಾನವನ್ನು ಅನುಸರಿಸುತ್ತ ಬರಲಾಗಿದೆ. ಪೆಟ್ರೋಲಿಯಮ್ಮನ್ನು ಆಸವಿಸಿ ಅದರಿಂದ ಪೆಟ್ರೋಲ್, ಸೀಮೆ ಎಣ್ಣೆ, ಡೀಸೆಲ್ ಎಣ್ಣೆ ಇತ್ಯಾದಿಗಳನ್ನು ತಯಾರಿಸುತ್ತಾರಷ್ಟೆ. ಹೀಗೆ ರಾಸಾಯನಿಕ ವಿಶ್ಲೇಷಣೆಯಲ್ಲಿಯೂ ಸಂಶೋಧನೆಯಲ್ಲಿಯೂ ಅನೇಕ ರಾಸಾಯನಿಕ ಉತ್ಪಾದನೆಯಲ್ಲಿಯೂ ಆಸವನದ ಪಾತ್ರ ಅನಿವಾರ್ಯ.

ಸರಳ ಆಸವನ ಕ್ರಿಯೆ ನಡೆಸುವಾಗ ಒಂದು ಪಾತ್ರೆಯಲ್ಲಿ ದ್ರವಮಿಶ್ರಣವನ್ನು ಕಾಸಲಾಗುವುದು. ಇದರ ಸಲುವಾಗಿ ವಿದ್ಯುತ್ತಾಪಕ, ಮರಳು ತಾಪಕ ಅಥವಾ ದ್ರವತಾಪಕವನ್ನಾಗಲಿ ಇಲ್ಲವೆ ದೀಪವನ್ನಾಗಲಿ (ಬುನ್‍ಸೆನ್ ದೀಪದ ಮಾದರಿಯದು) ಬಳಸಬಹುದು. ಅಲ್ಲಿ ಉಂಟಾದ ಆವಿಯನ್ನು ಸಾಂದ್ರಕದ ಮೂಲಕ ಹಾಯಿಸಲಾಗುವುದು. ಸಾಂದ್ರಕವನ್ನು ವಾಯುವಿಗೆ ಒಡ್ಡಿದರೂ ಸಾಕು ಆವಿ ದ್ರವರೂಪತಳೆದು ಬೇರೊಂದು ಪಾತ್ರೆಯಲ್ಲಿ ಸಂಗ್ರಹಿಸುವುದು. ಕೆಲವು ವೇಳೆ ಸಾಂದ್ರಕದ ಸುತ್ತ ಸತತವಾಗಿ ತಣ್ಣೀರನ್ನು ಹಾಯಿಸುತ್ತಿರಬೇಕಾಗುವುದು. ಪ್ರಯೋಗಶಾಲೆಯಲ್ಲಿ ಹೀಗೆ ಮಾಡುವುದು ಸಾಮಾನ್ಯ. ಅಲ್ಲಿ ಉಪಯೋಗಿಸುವ ಉಪಕರಣಗಳೆಂದರೆ ಪಾಶ್ರ್ವನಾಳವಿರುವ ಗಾಜಿನ ಜಾಡಿ. ಪಾಶ್ರ್ವನಾಳಕ್ಕೆ ಸಾಂದ್ರಕವನ್ನು ಜೋಡಿಸಿರುತ್ತಾರೆ. ಇದರಲ್ಲಿ ಆವಿ ತಣಿದು ದ್ರವವಾಗುತ್ತವೆ. ಇದು ಗಾಜಿನ ಸಂಗ್ರಾಹಕ್ಕೆ ತೊಟ್ಟಿಕ್ಕುವುದು. ಕೈಗಾರಿಕೆಯಲ್ಲಾದರೂ ಲೋಹದಿಂದ ಅಥವಾ ಶಾಖನಿರೋಧಕ ಮಣ್ಣಿನಿಂದ ಮಾಡಿದ ಕುದಿಹಂಡೆಗಳನ್ನು ಉಪಯೋಗಿಸುವರು. ಹಬೆ ಹಾಯುತ್ತಿರುವ ಸುರುಳಿ ಕೊಳವೆಗಳಿಂದ ಇವನ್ನು ಕಾಸುವುದು ವಾಡಿಕೆ.
ಸಾಮಾನ್ಯವಾಗಿ ದ್ರವ ಮಿಶ್ರಣದಲ್ಲಿರುವ ಅತ್ಯಂತ ಹೆಚ್ಚು ಆವಿಶೀಲವಾದ ಘಟಕ ಮೊದಲು ಬಟ್ಟಿ ಇಳಿಯುವುದು. ಆದರೆ ಮಿಶ್ರಣದ ಇತರ ಘಟಕಗಳು ಆವಿಶೀಲವಾಗಿರದೆ ಅಥವಾ ಆವಿಶೀಲತೆ ಬಲು ಕಡಿಮೆಯಾಗಿದ್ದ ಪಕ್ಷದಲ್ಲಿ ಬಟ್ಟಿ ಇಳಿದ ಮೊದಲ ಕಂತಿನಲ್ಲೂ ಅವು ಸೇರಿಕೊಂಡಿರುತ್ತವೆ. ಬಟ್ಟಿ ಇಳಿಯುತ್ತಿರುವ ಘಟಕದ ಕುದಿಬಿಂದುವನ್ನು ಉಷ್ಣತಾಮಾಪಕದಿಂದ ಅಳೆಯಬಹುದು. ಉಷ್ಣತಾಮಾಪಕದ ಬಲ್ಬು ಪಾಶ್ರ್ವನಾಳದ ಮಟ್ಟದಲ್ಲಿರುವಂತೆ ಜೋಡಿಸಲ್ಪಟ್ಟಿರಬೇಕು. ದ್ರವ ಮಿಶ್ರಣದ ಘಟಕಗಳ ಕುದಿಬಿಂದುಗಳ ನಡುವೆ ಗಣನೀಯ ವ್ಯತ್ಯಾಸವಿದ್ದರೆ ಮಾತ್ರ ಈ ಸರಳ ಆಸವನ ವಿಧಾನ ಉಪಯುಕ್ತ. ಘಟಕಗಳ ಕುದಿಬಿಂದುಗಳಲ್ಲಿ ಅಂಥ ವ್ಯತ್ಯಾಸ ಇರದಿದ್ದಾಗ ಅವನ್ನು ಬಟ್ಟಿ ಇಳಿಸಲು ವಿಶಿಷ್ಟ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ದ್ರವ ಮಿಶ್ರಣದ ಘಟಕಗಳ ಕುದಿಬಿಂದುಗಳ ನಡುವೆ ಗಣನೀಯ ವ್ಯತ್ಯಾಸವಿದ್ದಾಗ ಕನಿಷ್ಠ ಕುದಿಬಿಂದುವುಳ್ಳ ಘಟಕದ ಆವಿಶೀಲತೆ ಗರಿಷ್ಠವಾಗಿಯೂ ಗರಿಷ್ಠ ಕುದಿಬಿಂದುವುಳ್ಳ ಘಟಕದ ಆವಿಶೀಲತೆ ಕನಿಷ್ಠವಾಗಿಯೂ ಇರುವುದು. ಆದರೆ ಫಟಕದ ಕುದಿಬಿಂದುಗಳು ಪರಸ್ಪರ ಸನಿಹದಲ್ಲಿದ್ದರೆ ಪರಿಸ್ಥಿತಿ ಭಿನ್ನ. ಆಗ ಘಟಕಗಳ ಆವಿಶೀಲತೆಗಳಲ್ಲಿ ಏರುಪೇರಾಗುತ್ತದೆ. ಯಾವುದೇ ಘಟಕದ ಆವಿಶೀಲತೆಯನ್ನು ಅದರ ಆಂಶಿಕ ಒತ್ತಡದ ಮೂಲಕ ನಿಗದಿಪಡಿಸಬಹುದು. ಇದಕ್ಕೆ ಸಂಬಂಧಿಸಿದ ಗಣಿತೋಕ್ತಿ ಹೀಗಿದೆ : ಠಿ = (.P.x.  ಇಲ್ಲಿ ಠಿ ಘಟಕದ ಆವಿಶೀಲತೆಯನ್ನು ಆಂಶಿಕ ಒತ್ತಡ, ಅಥವಾ ಆವಿಶೀಲತೆ. x  ಅದರ ಮೋಲ್ ಭಿನ್ನಾಂಕ. P ಪ್ರಯೋಗೋಷ್ಣತೆಯಲ್ಲಿ ಪರಿಶುದ್ಧ ಘಟಕದ ಆವಿಯೊತ್ತಡ. ಪಟುತ್ವ ಗುಣಾಂಕ (ಆ್ಯಕ್ವಿವಿಟಿ ಕೋಎಫಿಷಿಯೆಂಟ್) ಎಂಬ ಒಂದು ತಿದ್ದುಪಡಿ. ಸರಳ ಆಸವನಕ್ಕೆ ಪರಿಚಿತ ನಿದರ್ಶನವೆಂದರೆ ಪ್ರಯೋಗಶಾಲೆಯಲ್ಲಿ ಬಟ್ಟಿ ಇಳಿಸುವ ನೀರಿನ ತಯಾರಿಕೆ.
ಆಸವನ ವಿಧಾನಗಳಲ್ಲಿ ಭಿನ್ನಾಸವನ (ಫ್ರ್ಯಾಕ್ಷನಲ್ ಡಿಸ್ಟಿಲೇಷನ್) ಮತ್ತು ಹಬೆ ಆಸವನ ಎಂಬ ಬಗೆಗಳುಂಟು. ನಾಶಕಾಸವನ (ಡಿಸ್ಟ್ರಕ್ವಿವ್ ಡಿಸ್ಟಿಲೇಷನ್) ಎಂಬ ಇನ್ನೊಂದು ಬಗೆಯಿದೆ. ಇಲ್ಲಿ ಪದಾರ್ಥವನ್ನು ವಾಯುಸಂಪರ್ಕಕ್ಕೆ ಬಾರದಂತೆ ಕಾಸಲಾಗುವುದು. ಇದಕ್ಕೆ ಕಾಷ್ಠ ಮತ್ತು ಕಲ್ಲಿದ್ದಲುಗಳ ಆಸವನ ಉತ್ತಮ ಉದಾಹರಣೆಗಳು.

ಒಣ ಕಟ್ಟಿಗೆಯನ್ನು ಕುಲುಮೆ ಅಥವಾ ರಿಟಾರ್ಟಿನಲ್ಲಿಟ್ಟು 160º-450º ಅ ಉಷ್ಣತಾಮಿತಿಯಲ್ಲಿ ಕಾಸುತ್ತ ಹೋದರೆ ಅನಿಲ, ದ್ರವ ಮತ್ತು ಘನಸ್ಥಿತಿಯಲ್ಲಿರುವ ಮೂರು ವಿಧವಾದ ಉತ್ಪನ್ನಗಳು ದೊರೆಯುತ್ತದೆ. ಇದು ಬಹಿರುಷ್ಣಕ ಕ್ರಿಯೆ ಯಾದ್ದರಿಂದ ಕ್ರಿಯಾ ಪ್ರಾರಂಭಕ್ಕೆ ಮಾತ್ರ ಉರುವಲು ಅಗತ್ಯ. ಅನಂತರ ತನ್ನ ಪಾಡಿಗೆ ತಾನು ಜರುಗುತ್ತಿರುತ್ತದೆ. ಆಗ ಮರ ಸೀದು ಗಟ್ಟಿ ಇದ್ದಲಾಗುವುದು. ಕೆಲವು ಆವಿಶೀಲ ಪಾದಾರ್ಥಗಳು ಹೋರಬಿಳುತ್ತವೆ. ಅವನ್ನು ನೀರಿನಿಂದ ತಣಿಸಿದ ಸಾಂದ್ರಕದ ಮೂಲಕ ಹಾಯಿಸಿದಾಗ ಒಂದು ಭಾಗ ಸಾಂದ್ರೀಕರಿಸಿ ಉಳಿದ ಭಾಗ ಅನಿಲ ರೂಪದಲ್ಲಿ ಮುಂದುವರಿಯುತ್ತದೆ. ಇದಕ್ಕೆ ಕಾಷ್ಠಾನಿಲ (ವುಡ್ ಗ್ಯಾಸ್) ಎಂದು ಹೆಸರು. ಇದರಲ್ಲಿರುವ ಮುಖ್ಯಾಂಶಗಳು ಮೀಥೇನ್ ಮತ್ತು ಹೈಡ್ರೊಜನ್. ಈ ಅನಿಲಮಿಶ್ರಣವನ್ನು ರಿಟಾರ್ಟಿನ ಕೆಳಗೆ ಉರಿಸಿ ಇಂಧನದಲ್ಲಿ ಸ್ವಲ್ಪ ಉಳಿತಾಯ ಸಾಧಿಸುತ್ತಾರೆ. ಸಾಂದ್ರೀಕರಿಸಿದ ದ್ರವ ಎರಡು ಪದರಗಳಾಗಿ ಬೇರ್ಪಡುವುದು. ಕೆಳಗಿನ ಪದರ ಮರದ ಡಾಂಬರು (ವುಡ್‍ಟಾರ್). ಮೇಲಿನದು ಉಷ್ಣಕಾಷ್ಠಾಮ್ಲವೆಂಬ (ಪೈರೊಲಿಗ್ನಿಯಸ್ ಆಸಿಡ್) ಜಲೀಯ ದ್ರವ. ಇದರ ಮುಖ್ಯಾಂಶಗಳೆಂದರೆ ಅಸಿಟಿಕ್ ಆಮ್ಲ (9-10%) ಮಿಥೆನಾಲ್ (1-2%) ಮತ್ತು ಅಸಿಟೋನ್ (0.1-0.5%). ಇದನ್ನು ಬೇರ್ಪಡಿಸಿ ತಾಮ್ರದ ಪಾತ್ರೆಗಳಲ್ಲಿ ಕಾಸಲಾಗುವುದು. ಆವಿಯನ್ನು ಬಿಸಿಯಾದ ಸುಣ್ಣದ ರಾಡಿಯ ಮೂಲಕ ಹಾಯಿಸಿದರೆ ಅಸಿಟಿಕ್ ಆಮ್ಲ ಮಾತ್ರ ಹೀರಲ್ಪಟ್ಟು ಕ್ಯಾಲ್ಸಿಯಮ್ ಅಸಿಟೇಟ್ ರೂಪದಲ್ಲಿ ಹಿಂದುಳಿಯುವುದು. ಅಸಿಟೋನ್ (ಕುದಿಬಿಂದು, 56.2º ಅ) ಮತ್ತು ಮಿಥೆನಾಲ್ (ಕುದಿ ಬಿಂದು, 64.5º ಅ) ಸ್ವಲ್ಪ ನೀರಾವಿಯೊಂದಿಗೆ ಹಾದುಹೋಗಿ ಸಾಂದ್ರಕಗಳಲ್ಲಿ ದ್ರವ ರೂಪ ತಳೆಯುತ್ತವೆ. ಸುಟ್ಟ ಸುಣ್ಣದ ಸಂಪರ್ಕದಲ್ಲಿ ಈ ದ್ರವ ಮಿಶ್ರಣವನ್ನು ಕುದಿಸಿದರೆ 70% ಮಿಥೆನಾಲ್ ದೊರೆಯುತ್ತದೆ.

ಕಲ್ಲಿದ್ದಲನ್ನು 350-1000º ಅ ಉಷ್ಣತಾಮಿತಿಯಲ್ಲಿ ನಾಶಕಾಸವನಕ್ಕೆ ಗುರಿಪಡಿಸಿದಾಗಲೂ ಅನಿಲ ದ್ರವ ಮತ್ತು ಘನ ರೂಪಗಳಲ್ಲಿರುವ ಮೂರು ವಿಧವಾದ ಉತ್ಪನ್ನಗಳು ಉಂಟಾಗುತ್ತವೆ. ಕಲ್ಲಿದ್ದಲ ಅನಿಲ ಉತ್ತಮ ಉರುವಲು, ರಿಟಾರ್ಟಿನಲ್ಲಿ ಉಳಿಯುವುದೆ ಕೋಕ್. ಅದರ ಒಳಪಾಶ್ರ್ವಕ್ಕೆ ಅಂಟಿಕೊಂಡಿರುವ ಗಟ್ಟಿಯಾದ ಚಕ್ಕೆ ಅನಿಲ ಕಾರ್ಬನ್. ಇವು ಉಪಯುಕ್ತ ವಸ್ತುಗಳು.

ಸಾಂದ್ರೀಕೃತ ದ್ರವವಸ್ತುಗಳು ಎರಡು ಪದರಗಳಾಗಿ ನಿಲ್ಲುತ್ತವೆ. ಮೇಲ್ಪದರ ಜಲೀಯ ಅಮೊನಿಯಾ ದ್ರಾವಣ. ಕೆಳಪದರ ಕಲ್ಲಿದ್ದಲ ಡಾಂಬರು. ಇದು ಮಂದವಾದ ಕಪ್ಪು ಬಣ್ಣದ ಅಹಿತ ವಾಸನೆಯುಳ್ಳ ದ್ರವ ಮಿಶ್ರಣ. ಇದನ್ನು ಭಿನ್ನಾಸವನಕ್ಕೆ ಗುರಿಪಡಿಸಿದರೆ ಬೇರೆ ಬೇರೆ ಉಷ್ಣತಾಮಿತಿಗಳಲ್ಲಿ ಮುಂದಿನ ದ್ರವೋತ್ಪನ್ನಗಳು ಆಸವಿಸುತ್ತವೆ :
80º-170º ಅ ಹಗುರ ತೈಲ (ಲೈಟ್ ಆಯಿಲ್)
170º-230º ಅ ತೈಲ (ಮಿಡ್ಲ್ ಆಯಿಲ್)
230º-270º ಅ ಭಾರ ತೈಲ (ಹೆವಿ ಆಯಿಲ್)
270º-400º ಅ ಹಸಿರು ತೈಲ (ಗ್ರೀನ್ ಆಯಿಲ್)

ಬಟ್ಟಿಯಲ್ಲಿ ಉಳಿಯುವುದು ಪಿಚ್. ಮಂದವಾದ ಈ ಕಪ್ಪು ದ್ರವ ರಸ್ತೆ ದುರಸ್ತಿಗೆ ಉಪಯುಕ್ತ. ಮೇಲಿನ ದ್ರವೋತ್ಪನ್ನಗಳನ್ನು ಮತ್ತೆ ಭಿನ್ನಾಸವನಕ್ಕೆ ಒಳಪಡಿಸಿ ಅಮೂಲ್ಯ ಕಾರ್ಬನಿಕ ಸಂಯುಕ್ತಗಳನ್ನು ತಯಾರಿಸಬಹುದು. ಉದಾಹರಣೆಗೆ ಹಗುರ ತೈಲದಿಂದ ದೊರೆಯುವ ಬೆನ್ಸೀನ್ ಮತ್ತು ಟಾಲ್ಯೂಯಿನ್, ನಡು ತೈಲದಿಂದ ಬರುವ ಫೀನಾಲ್, ನ್ಯಾಫ್ತಲೀನ್ ಮತ್ತು ಪಿರಡಿನ್, ಭಾರ ತೈಲದಿಂದ ಹೊರಬೀಳುವ ಕ್ರೆಸಾಲುಗಳು ಮತ್ತು ಕ್ವಿನೊಲಿನುಗಳು, ಹಸಿರು ತೈಲದಿಂದ ಸಿಕ್ಕುವ ಆಂತ್ರಸೀನ್ ಫಿನಾಂತ್ರೀನ್ ಮತ್ತು ಕಾರ್ಬನೋಲುಗಳನ್ನು ಹೆಸರಿಸಬಹುದು.

	ಕೆಲವು ದ್ರವಗಳು ಅತ್ಯುನ್ನತ ಉಷ್ಣತೆಗಳಲ್ಲಿ ಕುದಿಯುತ್ತದೆ. ಮತ್ತೆ ಕೆಲವು ತಮ್ಮ ಕುದಿ ಬಿಂದುವಿನಲ್ಲಿ ವಿಭಜನೆಗೊಳ್ಳುತ್ತವೆ. ಇಂಥ ದ್ರವಗಳು ಸಾಮಾನ್ಯ ವಾಯುಮಂಡಲದ ಒತ್ತಡದಲ್ಲಿ ಬಟ್ಟಿ ಇಳಿಸಲಾಗದವು. ಇವುಗಳ ಸಲುವಾಗಿ ನಿರ್ವಾತ ಆಸವನ (ವ್ಯಾಕ್ಯೂಮ್ ಡಿಸ್ಟಿಲೇಷನ್) ಪ್ರಶಸ್ತ. ವಾಸ್ತವವಾಗಿ ಸಂಪೂರ್ಣ ನಿರ್ವಾತ ಸ್ಥಿತಿ ಇರುವುದಿಲ್ಲ. ಇಳಿಸಿದ ಒತ್ತಡದಲ್ಲಿ ದ್ರವವನ್ನು ಕುದಿಸಲಾಗುವುದು. ಹೈಡ್ರೊಜನ್ ಪರಾಕ್ಸೈಡಿನ ಜಲೀಯ ದ್ರಾವಣವನ್ನು ಸಾರೀಕರಿಸುವುದು ಹೀಗೆಯೆ.		
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ